Thursday, November 29, 2018

ಕೊನೆಯ ಪಯಣ

ಹೊತ್ತಿಲ್ಲದ ಹೊತ್ತಲ್ಲಿ, ಯಾರಿಗೂ ತಿಳಿಯದ ಮಬ್ಬಲ್ಲಿ,
ಸುಧೀರ್ಘ ಶಯನ....
ಹೊಸದೊಂದು ಲೋಕಕ್ಕೆ ಪಯಣ!!

ಹೀಗಿದೆಯಂತೆ!! ಹಾಗಿದೆಯಂತೆ!!
ಕಾಣದಿದ್ದರೂ ಎಷ್ಟೋ ಊಹಾ ಪೋಹಾ,
ಕಲ್ಪನೆಗೆ ಎಲ್ಲಿದೆ ಕಡಿವಾಣ?

ನಿಶಬ್ಧ ಶ್ವೇತಜಾಲದಲಿ ನಿಗೂಢ ಜಗತ್ತು,
ಹೆಜ್ಜೆ ಹೆಜ್ಜೆಗೂ ನಮ್ಮದೇ ಕಥೆಗಳ ತುಣುಕು..
ಇದೆ, ಹೌದು ಇದೆ… ನಾವು ಮಾಡಿದ ಕರ್ಮಗಳ ದರ್ಶನ!!

ನಾನು ನನ್ನದು ಎಂದು ಬೀಗಿದ ಅಹಂಕಾರ,
ಮೌನವ ಆವರಿಸಿಕೊಂಡು ಸತ್ಯವ ಕೊಂದ ಕೀಚಕ,
ಸಿಹಿ ಮಾತಿಂದ ಎಲ್ಲವ ಕಸಿದುಕೊಂಡ ಸಮಯಸಾಧಕ..

ಮುರಿದ ಮಾತು, ಕೊಟ್ಟ ನೋವು, ಮಿತಿ ಇಲ್ಲದ ಮೋಹ ಕಥನ!!
ಕೊಟ್ಟ ಶಾಪ, ತೆತ್ತ ಪ್ರಾಣ, ಆಸೆಗಳ ದಾಹ,
ಒಂದೊಂದಾಗಿ ಇಣುಕುತ್ತಿವೆ, ಮನವ ಕಲುಕುತ್ತಿವೆ

ಇದೊಂದು ಒಪ್ಪಂದದ ಪಯಣ!!
ಪರದೆಯ ಸರಿಸು,
ನಿನ್ನಲ್ಲಿ ಲೀನವಾಗಿದ್ದ ಆತ್ಮಕ್ಕೆ ಮುಕ್ತಿ ಕೊಡು!!
ಮಾಡಿದ ಪಾಪಕ್ಕೆ ಕ್ಷಮೆಯಾಚಿಸು

ಕೊನೆಯ ಪಯಣ, ನಮ್ಮದೇ ಕರ್ಮಗಳ ದರುಶನ!! 

Wednesday, October 21, 2015

ದರ್ಪಣ - ನಾ ನಿನ್ನ ಕಂಡಂತೆ



ಸಾವಿರ ಸುಳ್ಳುಗಳಲ್ಲಿ ಕೋಟಿ ಕೋಟಿ ಕಟ್ಟುಕಥೆ
ನನಗೆ ಬೇಕಂತೆ ನನ್ನ ಕಥೆ, ನಿಮಗೆ ಬೇಕಂತೆ ನಿಮ್ಮ ಕಥೆ..
ತಿರುಳನ್ನೇ ತಿರುವಿಸಿ, ಸತ್ಯವ ಅಣುಕಿಸಿ, ಸಾರಿ ಸಾರಿ ಹರಡುವ ಮಿಥ್ಯಕಥೆ

ಬೇಕಾದಾಗ ನಾ ನಿನ್ನ ಬಂಧು, ನಿನ್ನೊಳಗಿನ ಆತ್ಮ ಬಿಂದು
ಬೇಡವಾದಾಗ ಕಂಡರೂ ಕಾಣದ ಕಾಲಕಸ!!
ಕಲಿಗಾಲವಿದು!! ಪ್ರೀತಿ ವಿಶ್ವಾಸಕ್ಕೆ ಬೆಲೆ ಇಲ್ಲ, ಸಂಬಂಧ ಅನುಬಂಧಕ್ಕೂ ನೆಲಯಿಲ್ಲ;
ಕಾಗದದ ಚೂರಿಗೆ ಸಿಗುವ ಕಿಮ್ಮತ್ತು ಯಾವ ಸಂಬಂಧಕ್ಕೂ ಸಿಗದಲ್ಲ!!

ನಿಜ!! ಕಲಿಗಾಲವಿದು, ಜೀವನವೇ ಇಲ್ಲಿ ರೂಪಕ,
ನಮ್ಮೊಳಗಿನ ಕಲೆಗಾರನಿಗೆ ಇದೇ ನಿತ್ಯ ಕಾಯಕ
ನಟಿಸು, ಎಲ್ಲರೆದುರು ನೀ ನಟಿಸು,ಮುದ್ದು ನಗೆ, ಚೆಂದ ಮೋಗ, ಹಿತವಾದ ನಡುವಳಿಕೆ,
ಯಾರೊಂದಿಗೆ ಎಷ್ಟು ಮಾತು? ಯಾರೊಂದಿಗೆ ಎಷ್ಟು ಮುನಿಸು? ಎಲ್ಲದರಲು ಲೆಕ್ಕಾಚಾರ…
ಎಲ್ಲರಿಗೂ ಕಾಣುವುದು ತೋರಿಕೆಯ "ನನ್ನ-ನಿನ್ನ" ಮುಖವಾಡ!!

ಮಾಯೆ, ಮನಸು ಮಾಯೆ!! ಅಲ್ಲಿ ನೆಲೆಸಿರುವ ಆಸೆಯೇ ನಮ್ಮನ್ನು ಆಳುವ ಮಹಾಮಾಯೇ…

Tuesday, August 4, 2015

ಹುಡುಕಾಟ...






ನಡೆದ ನಾ ಅವನ ಹುಡುಕುತ್ತಾ, ಸಿಗದ ಸ್ವಪ್ನವ ಮೆಲಕು ಹಾಕುತ್ತಾ,
ಎಂದೋ ಕಂಡ ಕನಸು, ಎಂದೋ ನುಡಿದ ಮಾತು
ಮನದಲಿ ಬಚ್ಚಿಟ್ಟ ಪ್ರೀತಿಗೆ, ಕಾಲದ ಪರದೆ…

ಅಲ್ಲೊಂದು ತಿರುವಿನಲ್ಲಿ, ನಿಶೆಯ ಬೆಳಕಿನಲಿ, ನನ್ನವನ ಆಗಮನ!!
ಯಾವ ಕಿನ್ನರನೂ ಅಲ್ಲ, ಯಾವ ಗಂಧರ್ವನೂ ಅಲ್ಲ, ಅವರ್ಯಾರು ನನ್ನವನ ಎದುರು ನಿಲ್ಲುವಂತಿಲ್ಲ
ಕೋಟಿ ಚುಕ್ಕಿಗಳು ಇಣುಕಿದವು, ನನ್ನವನ ಕಿರುನಗೆಯ ಬಯಸಿದವು
ಸ್ವಪ್ನ ಲೋಕದ ಆಶಗೊಪುರದಲ್ಲಿ, ನಾನಾದೆ ಅವನ ಚಕೋರಿ

ಬೇಕು ಬೇಡಗಳ ಪರಿವಿಲ್ಲದೆ, ಪ್ರೀತಿಯ ಆಲಾಪನೆಯಲಿ ಮುಳುಗಿದ್ದೆ
ಒಂದಿಷ್ಟು ದೂರದ ಅವನ ಸಾಂಗತ್ಯ, ಬೇಕೆನಿಸಿತು ಅವನದೇ ಸಾಮಿಪ್ಯ
ಪ್ರೀತಿ ಪ್ರೇಮದ ಗುಂಗಿನಲಿ, ನಾನದೆ ಅವನ ರಾಧೇ… ಹೌದು, ನಾನೇ ಅವನ ರಾಧೇ!!


ಧೋ ಎಂದು ಸುರಿವ ಮಳೆಯಲಿ, ಅವನೊಡನೆ ಎರಡೆಜ್ಜೆ,
ಎರಡೆಜ್ಜೆಗೇ ಕದಡಿದ ನನ್ನವ, ನನ್ನಲ್ಲಿರೋ ಲಜ್ಜೆ-ಗೆಜ್ಜೆ,
ಚಿಟ ಪಟ ಹನಿಗಳ ಸದ್ದು ಹೊರಗೆ; ಒಲವ ಮಿಡಿತ ನನ್ನೊಳಗೆ,
ಕೊರೆವ ಚಳಿಗೆ, ಅವನ ಬಿಸಿ ಉಸಿರ ಕಾವು, ಸದಾ ಕಾಡುವುದು ಅವನ ನೆನಪುಗಳ ನೋವು!!               

ನಡೆದ ನಾ ಅವನ ಹುಡುಕುತ್ತಾ, ಸಿಗದ ಸ್ವಪ್ನವ ಮೆಲಕು ಹಾಕುತ್ತಾ,
ಮನದಲಿ ಬಚ್ಚಿಟ್ಟ ಪ್ರೀತಿಗೆ, ಕಾಲವೇ ಸರಿಸಿತು ಪರದೆ!!
ಏನೆಂದು ಹುಡುಕಲಿ ನಿನ್ನ. ಹೇಗಿನ್ನು ಮರೆಯಲಿ ನಿನ್ನ,
ಪ್ರೀತಿ ಪ್ರೇಮದ ಗುಂಗಿನಲಿ, ನಾನದೆ ನಿನ್ನ ರಾಧೇ… ನಾನೇ ನಿನ್ನ ಪ್ರೀತಿಯ ರಾಧೇ!!

Monday, May 11, 2015

ಮಳೆಯಲ್ಲೊಂದು ಕವನ!!



ಮಳೆಯಲ್ಲೊಂದು ಕವನ!!
 ಒಂದೊಂದು ಹನಿಯಲ್ಲೂ, ಗತ ಕಾಲದ ಕಥನ,
ಇಳೆಯ ಏಕಾಂತಕ್ಕೆ, ನಭನ ಸರಸ ಸಾಮಿಪ್ಯ
ಅವರ ಪ್ರೀತಿಗೆ, ಪ್ರಕೃತಿಯ ಸಾಕ್ಷಾತ್ಕಾರ!!
ಬೇಕು ಒಂದಷ್ಟು ಮಳೆಯ ಕ್ಷಣಗಳು
ಸಂತಸದಲಿ ನೆಂದು ನಲಿಯುವ ಮನಸುಗಳು!!

ಕ್ಲೇಷಗಳ ಎದುರಿಸಿ ಅಚಲಳಾಗಿ ನಿಂತಿರುವಳೂ ಕ್ಷೋಣಿ!!
ಅವಳ ಸೌಂದರ್ಯಕ್ಕೆ, ಸಹನೆಯೇ ಮೆರಗು..
ಹೆಜ್ಜೆ ಹೆಜ್ಜೆಗೂ ಹೊಸತನದ ಬಿನ್ನಾಣ,
ಕಲ್ಪನೆಗೂ ಮೀರಿದೆ ಅವಳ ಚೆಲುವಿನ ಚಿತ್ರಣ!!
ಹನಿ ಹನಿಯಾಗಿ ಧರೆಗಿಳಿದ ಘಳಿಗೆ,
ಮೊಳಗಿದವು ಮಿಂಚು ಗುಡುಗಿನ ಪ್ರೇಮ ನಿನಾದ!!

ಕೋಟಿ ಕೋಟಿ ಜೀವ ರಾಶಿ ಮಡಿಲಲ್ಲಿ, ಮಮತೆಯ ಚಿಲುಮೆ ಎದೆಯಲ್ಲಿ
ಕಾಯುತ್ತಿರುವಳೂ ಧರೆ, ನಭನ ಆಗಮನಕ್ಕೆ; ಅವನ ಆಲಿಂಗನಕ್ಕೆ!!
ಮಮತೆಯ ಚಿಲುಮೆ ಹರಿಸುತ್ತ, ಸೌಂದರ್ಯದ ಸಿರಿಯಲ್ಲಿ ಮೆರಿಯುತ್ತ          
ಹುಟ್ಟು, ಸಾವು, ನೋವು, ನಲಿವು, ಆದಿ, ಅಂತ್ಯ ಎಲ್ಲವ ತನ್ನೊಳಗೆ ಸವಿಸುತ್ತ 
ನಿಂತಿರುವಳೂ ಧರೆ, ಪ್ರೀತಿಯ ಮಳೆಯಲಿ; ಗೆಳೆಯನ ಒಲುಮೆಯ ಆಲಿಂಗನದಲಿ..