Thursday, November 29, 2018

ಕೊನೆಯ ಪಯಣ

ಹೊತ್ತಿಲ್ಲದ ಹೊತ್ತಲ್ಲಿ, ಯಾರಿಗೂ ತಿಳಿಯದ ಮಬ್ಬಲ್ಲಿ,
ಸುಧೀರ್ಘ ಶಯನ....
ಹೊಸದೊಂದು ಲೋಕಕ್ಕೆ ಪಯಣ!!

ಹೀಗಿದೆಯಂತೆ!! ಹಾಗಿದೆಯಂತೆ!!
ಕಾಣದಿದ್ದರೂ ಎಷ್ಟೋ ಊಹಾ ಪೋಹಾ,
ಕಲ್ಪನೆಗೆ ಎಲ್ಲಿದೆ ಕಡಿವಾಣ?

ನಿಶಬ್ಧ ಶ್ವೇತಜಾಲದಲಿ ನಿಗೂಢ ಜಗತ್ತು,
ಹೆಜ್ಜೆ ಹೆಜ್ಜೆಗೂ ನಮ್ಮದೇ ಕಥೆಗಳ ತುಣುಕು..
ಇದೆ, ಹೌದು ಇದೆ… ನಾವು ಮಾಡಿದ ಕರ್ಮಗಳ ದರ್ಶನ!!

ನಾನು ನನ್ನದು ಎಂದು ಬೀಗಿದ ಅಹಂಕಾರ,
ಮೌನವ ಆವರಿಸಿಕೊಂಡು ಸತ್ಯವ ಕೊಂದ ಕೀಚಕ,
ಸಿಹಿ ಮಾತಿಂದ ಎಲ್ಲವ ಕಸಿದುಕೊಂಡ ಸಮಯಸಾಧಕ..

ಮುರಿದ ಮಾತು, ಕೊಟ್ಟ ನೋವು, ಮಿತಿ ಇಲ್ಲದ ಮೋಹ ಕಥನ!!
ಕೊಟ್ಟ ಶಾಪ, ತೆತ್ತ ಪ್ರಾಣ, ಆಸೆಗಳ ದಾಹ,
ಒಂದೊಂದಾಗಿ ಇಣುಕುತ್ತಿವೆ, ಮನವ ಕಲುಕುತ್ತಿವೆ

ಇದೊಂದು ಒಪ್ಪಂದದ ಪಯಣ!!
ಪರದೆಯ ಸರಿಸು,
ನಿನ್ನಲ್ಲಿ ಲೀನವಾಗಿದ್ದ ಆತ್ಮಕ್ಕೆ ಮುಕ್ತಿ ಕೊಡು!!
ಮಾಡಿದ ಪಾಪಕ್ಕೆ ಕ್ಷಮೆಯಾಚಿಸು

ಕೊನೆಯ ಪಯಣ, ನಮ್ಮದೇ ಕರ್ಮಗಳ ದರುಶನ!!