Monday, May 11, 2015

ಮಳೆಯಲ್ಲೊಂದು ಕವನ!!



ಮಳೆಯಲ್ಲೊಂದು ಕವನ!!
 ಒಂದೊಂದು ಹನಿಯಲ್ಲೂ, ಗತ ಕಾಲದ ಕಥನ,
ಇಳೆಯ ಏಕಾಂತಕ್ಕೆ, ನಭನ ಸರಸ ಸಾಮಿಪ್ಯ
ಅವರ ಪ್ರೀತಿಗೆ, ಪ್ರಕೃತಿಯ ಸಾಕ್ಷಾತ್ಕಾರ!!
ಬೇಕು ಒಂದಷ್ಟು ಮಳೆಯ ಕ್ಷಣಗಳು
ಸಂತಸದಲಿ ನೆಂದು ನಲಿಯುವ ಮನಸುಗಳು!!

ಕ್ಲೇಷಗಳ ಎದುರಿಸಿ ಅಚಲಳಾಗಿ ನಿಂತಿರುವಳೂ ಕ್ಷೋಣಿ!!
ಅವಳ ಸೌಂದರ್ಯಕ್ಕೆ, ಸಹನೆಯೇ ಮೆರಗು..
ಹೆಜ್ಜೆ ಹೆಜ್ಜೆಗೂ ಹೊಸತನದ ಬಿನ್ನಾಣ,
ಕಲ್ಪನೆಗೂ ಮೀರಿದೆ ಅವಳ ಚೆಲುವಿನ ಚಿತ್ರಣ!!
ಹನಿ ಹನಿಯಾಗಿ ಧರೆಗಿಳಿದ ಘಳಿಗೆ,
ಮೊಳಗಿದವು ಮಿಂಚು ಗುಡುಗಿನ ಪ್ರೇಮ ನಿನಾದ!!

ಕೋಟಿ ಕೋಟಿ ಜೀವ ರಾಶಿ ಮಡಿಲಲ್ಲಿ, ಮಮತೆಯ ಚಿಲುಮೆ ಎದೆಯಲ್ಲಿ
ಕಾಯುತ್ತಿರುವಳೂ ಧರೆ, ನಭನ ಆಗಮನಕ್ಕೆ; ಅವನ ಆಲಿಂಗನಕ್ಕೆ!!
ಮಮತೆಯ ಚಿಲುಮೆ ಹರಿಸುತ್ತ, ಸೌಂದರ್ಯದ ಸಿರಿಯಲ್ಲಿ ಮೆರಿಯುತ್ತ          
ಹುಟ್ಟು, ಸಾವು, ನೋವು, ನಲಿವು, ಆದಿ, ಅಂತ್ಯ ಎಲ್ಲವ ತನ್ನೊಳಗೆ ಸವಿಸುತ್ತ 
ನಿಂತಿರುವಳೂ ಧರೆ, ಪ್ರೀತಿಯ ಮಳೆಯಲಿ; ಗೆಳೆಯನ ಒಲುಮೆಯ ಆಲಿಂಗನದಲಿ..
                                   

Tuesday, May 5, 2015

ರಾಧೇ-ಶ್ಯಾಮ...




ನಾನಾದರೆ ರಾಧೇ ನೀ ನನ್ನ ಶ್ಯಾಮ
ನಿನ್ನಲ್ಲೇ ಲೀನಳಾದೆ, ನಾ ನಿನ್ನಲ್ಲೇ ತಲ್ಲಿನಳಾದೆ   
ಗೆಳೆಯಾ, ನಾನಾದರೆ ರಾಧೆ ನೀನೇ ನನ್ನ ಶ್ಯಾಮ !!

ಪ್ರೆಮಶಾಹಿ, ಕಣ್ಣಲ್ಲೇ ಕನಸ ಓಕುಳಿ ಎರಚಿರಲು,
ಮೂಡಿದೆ ಬಣ್ಣ ಬಣ್ಣದ ಪ್ರೀತಿಯ ಚಿತ್ತಾರ
ಸೋತಿರುವೆ ನಿನಗೆ, ನಿನ್ನ ಬಿಚ್ಚು ಮನಸ್ಸಿಗೆ, ಮುಗ್ಧ ನಗುವಿಗೆ...

ಪ್ರೀತಿ, ಪ್ರೇಮ, ಪ್ರಣಯ ಕಲಿಕೆಯಲ್ಲ
ನೀನು ಕಲಿಸಿ ಅದನಾನು ಕಲಿಯುವಂತಲ್ಲ,
ಅದೊಂದು ನಿರ್ಮಲ ನಿರ್ಲಿಪ್ತ ಭಾವ,
ಹರಿಯುವಾಗ ಪ್ರೀತಿಯ ಹೊನಲು; ಅಂತರಂಗದಲಿ ನಿಲ್ಲದು ಒಲುಮೆಯ ಗಾನ

ಪರಿ ಪರಿ ಕಾಡುವುದು, ಪರಿ ಪರಿ ಕೆಣಕುವುದು,
ಜೊತೆಗಿದ್ದಾಗ ನೀನೇ ನೀನು, ಇಲ್ಲದಿದ್ದಾಗ ನಿನ್ನದೇ ನೆನಪು,
ಪ್ರೀತಿಯ ರೀತಿ ನೀತಿ ನಾನರಿತಿಲ್ಲ, ಅದರ ಆಳ ಅಂತರಾಳ ತಿಳಿದಿಲ್ಲ
ಜೊತೆಗಿದ್ದರು ಸರಿ, ನೀ ಮರೆತು ಬಾರದಿದ್ದರೂ ಸರಿ,
ನಾನೇ ನಿನ್ನ ರಾಧೇ, ನೀನೇ ನನ್ನ ಶ್ಯಾಮ…